ಪಾಟ್ಸ್ ಜೂಸೆಪ್ಪಿ
1746-1826. ಇಟಲಿ ದೇಶದ ಖಗೋಳ ವಿಜ್ಞಾನಿ, ಸೀರೀಸ್ ಕ್ಷುದ್ರಗ್ರಹವನ್ನು ಪ್ರಥಮವಾಗಿ ಆವಿಷ್ಕರಿಸಿದವ. ನಕ್ಷತ್ರ ಸ್ಥಾನಗಳನ್ನು ಸೂಚಿಸುವ ಯಾದಿಗಳನ್ನು ರಚಿಸಿ ಆಧುನಿಕ ಖಗೋಳ ವಿಜ್ಞಾನದ ಪ್ರಗತಿಗೆ ವಿಶೇಷ ವೇದಿಕೆ ಒದಗಿಸಿದಾತ. 1746 ಜುಲೈ 16 ರಂದು ಜನಿಸಿ, ಸಾಂಪ್ರದಾಯಿಕ ಶಿಕ್ಷಣ ಪಡೆದು, ಕ್ಯಾತೊಲಿಕರ ತಿಯಟೈನ್ ಪಂಗಡದಲ್ಲಿ ಧರ್ಮಗುರುವಾಗಿ ದೀಕ್ಷೆ ಪಡೆದ. 1769 ರಿಂದ 1779ರ ತನಕ ಇಟಲಿಯ ಬೇರೆ ಬೇರೆ ನಗರಗಳಲ್ಲಿ ತತ್ತ್ವಶಾಸ್ತ್ರವನ್ನೂ ಗಣಿತವನ್ನೂ ಬೋಧಿಸಿದ. 1780ರಲ್ಲಿ ಪಾಲೆರ್ಮೋ ಅಕಾಡೆಮಿಯಲ್ಲಿ ಪ್ರೌಢ ಗಣಿತ ಪೀಠಕ್ಕೆ ಆಹ್ವಾನಿತನಾಗಿ ಆ ಪ್ರಾಚಾರ್ಯತ್ತ್ವವನ್ನು ಸ್ವೀಕರಿಸಿದ. ಅಲ್ಲಿ ಸ್ಥಾಪಿಸಲು ಉದ್ದೇಶಿಸಿದ ವೇದ ಶಾಲೆಗೆ ಉತ್ತಮ ಉಪಕರಣಗಳನ್ನೂ ಸಲಕರಣೆಗಳನ್ನೂ ಖುದ್ದು ಪರೀಕ್ಷಿಸಿ ಖರೀದಿಸಲೋಸ್ಕರ 1780ರ ಕೊನೆಯಲ್ಲಿ ಇಂಗ್ಲೆಂಡಿಗೆ ತೆರಳಿದಾಗ ಅಲ್ಲಿ ಈತ ಭೇಟಿ ಆದ ಖಗೋಳವಿದರ ಪೈಕಿ ಸುಪ್ರಸಿದ್ಧ ವಿಲಿಯಮ್ ಹರ್ಶಲ್ (1738-1822 : ಯುರೇನಸ್ ಗ್ರಹದ ಆವಿಷ್ಕರ್ತೃ) ಒಬ್ಬನಾಗಿದ್ದ. ಹರ್ಶೆಲ್‍ನ ಹಿರಿಗಾತ್ರದ ದೂರದರ್ಶಕವನ್ನು ಪರೀಕ್ಷಿಸಿ ಹೊಸ ಮಾಹಿತಿ ಸಂಗ್ರಹಿಸಿದ. 1788 ಜೂನ್ 3 ರ ಸೂರ್ಯಗ್ರಹಣವನ್ನು ಗ್ರೇನಿಚ್ ವೇಧಶಾಲೆಯಿಂದ ವೀಕ್ಷಿಸಿದ. ಗ್ರೇನಿಚ್ ವೇಧಶಾಲೆಯನ್ನು ಆಧರಿಸಿದಂತೆ ಪ್ರಪಂಚದ ವಿವಿಧ ವೇಧಶಾಲೆಗಳ ರೇಖಾಂಶ ವ್ಯತ್ಯಾಸವನ್ನು ನಮೂದಿಸುವ ಲೇಖನವನ್ನು ಪ್ರಕಟಿಸಿದ. (1789).

ಇಂಗ್ಲೆಂಡಿನಿಂದ ಮರಳಿದ ಪ್ಯಾಟ್ಸಿ ಪಾಲೆರ್ಮೋ ವೇದಶಾಲೆಯ ಸ್ಥಾಪನೆಯಲ್ಲಿ ಉದ್ಯುಕ್ತನಾದ. ಅದು ಸಜ್ಜುಗೊಂಡು ಕ್ರಿಯಾಶೀಲವಾದಾಗ (1790) ಈತನನ್ನೇ ಅದರ ಪ್ರಥಮ ನಿರ್ದೇಶಕನಾಗಿ ನೇಮಿಸಲಾಯಿತು. ನಕ್ಷತ್ರಗಳನ್ನು ವ್ಯವಸ್ಥಿತವಾಗಿ ವೀಕ್ಷಿಸಿ ಅವುಗಳ ಸ್ಥಾನ ನಿರ್ದೇಶಕಗಳನ್ನು-ವಿಶುವದಂಶ-(ರೈಟ್ ಅಸೆನ್ಶನ್) ಮತ್ತು ಘಂಟಾವೃತ್ತಾಂಶ (ಡೆಕ್ಲಿನೇಶನ್) - ಗಣಿಸಿ ನಿರ್ಧರಿಸುವುದು ಇವನ ಜೀವನದ ಉಸಿರು ಮತ್ತು ಉದ್ದೇಶ ಎಂಬಂತೆ ಆ ಕೆಲಸಕ್ಕೆ ಧುಮುಕಿದ. ಆ ದಿನಗಳಂದು ಪಾಲೆರ್ಮೋಕ್ಕಿಂತ ದಕ್ಷಿಣಕ್ಕೆ ಯಾವ ವೇದ ಶಾಲೆಯೂ ಇರಲಿಲ್ಲ. ಹೀಗಾಗಿ ಇತರ ಯಾವ ವೇದಶಾಲೆಯ ವೀಕ್ಷಕರಿಗೂ ಗೋಚರಿಸದ ದಕ್ಷಿಣದ ಹಲವಾರು ನಕ್ಷತ್ರಗಳನ್ನು ಪ್ಯಾಟ್ಸಿ ವೀಕ್ಷಿಸಬಲ್ಲವನಾಗಿದ್ದ. ಆ ಪ್ರದೇಶದ ವಾಯುಗುಣ ನಕ್ಷತ್ರ ವೀಕ್ಷಣೆಗೆ ಅನುಕೂಲವಾಗಿದ್ದುದು ಹೆಚ್ಚಿನ ಸೌಕರ್ಯ. ಹಿಂದೆಂದೂ ವ್ಯವಸ್ಥಿತ ವೀಕ್ಷಣೆಗೆ ಒಳಪಡದ ನಕ್ಷತ್ರಗಳನ್ನು ಈತ ಎಚ್ಚರಿಕೆಯಿಂದ ಗಮನಿಸಿ ಅವುಗಳ ಖಗೋಳ ನಿರ್ದೇಶಕಗಳನ್ನೂ ಕರಾರುವಕ್ಕಾಗಿ ನಿರ್ಧರಿಸುವುದರಲ್ಲಿ ಯಶಸ್ವಿಯಾದ. 

ಹತ್ತೊಂಬತ್ತನೆಯ ಶತಮಾನದ ಪ್ರಥಮ ರಾತ್ರಿ (1801 ಜನವರಿ 1) ಪ್ಯಾಟ್ಸಿ ವೃಷಭ ರಾಶಿಯನ್ನು ದೂರದರ್ಶಕದ ಮೂಲಕ ಸೋಸುವುದರಲ್ಲಿ ಮಗ್ನನಾಗಿದ್ದ. ಪ್ರಚಲಿತ ನಕ್ಷತ್ರಯಾದಿಯಲ್ಲಿ ಉಲ್ಲೇಖಿತವಾಗಿದ್ದ ಅಲ್ಲದೇ, ಆ ಮೊದಲು ಈತನೇ ಒಮ್ಮೆ ಗುರುತಿಸಿದ್ದ ಏಳನೆಯ ಕಾಂತಿಮಾನದ (ಮ್ಯಾಗ್ನಿಟ್ಯೂಡ್) ನಕ್ಷತ್ರ ತಪಾಸಣೆ ಈತನ ಉದ್ದೇಶ. ಉದ್ದಿಷ್ಟ ನಕ್ಷತ್ರ ಈತನಿಗೆ "ದರ್ಶನ” ವೀಯುವ ಮೊದಲು ಯಾದಿಯಲ್ಲಿ ಉಲ್ಲೇಖಿತವಾಗಿರದ, ಮಸುಕು ಕಾಯವೊಂದರ ಇರವನ್ನು ಕಂಡು ಅಚ್ಚರಿಗೊಂಡ. ಹೊಸ ಶತಮಾನದ ಮೊದಲ ಇರುಳಿನ ಕೊಡುಗೆ ಇದಾಗಿತ್ತು. ಮುಂದಿನ ರಾತ್ರಿಗಳಲ್ಲಿ ಪ್ಯಾಟ್ಸಿ ಆಗಂತುಕ ಕಾಯವನ್ನು ಮತ್ತೆ ಮತ್ತೆ ವೀಕ್ಷಿಸಿ, ನಕ್ಷತ್ರದಂತಲ್ಲದೇ ಅದಕ್ಕೆ ಅತಿ ಸೂಕ್ಷ್ಮ ಚಲನೆ ಇದ್ದುದನ್ನು ಗಮನಿಸಿ, ಅದೊಂದು ನೂತನ ಗ್ರಹ ಇಲ್ಲವೇ ಧೂಮಕೇತು ಆಗಿರಬೇಕೆಂದು ಭಾವಿಸಿದ. ಫೆಬ್ರವರಿ 11ರ ತನಕ ಪ್ರತಿನಿತ್ಯ ಅದನ್ನು ವೀಕ್ಷಿಸಿದ. ಈ ಅವಧಿಯಲ್ಲಿ ಅದರ ವಕ್ರಗಮನ (ರಿಟ್ರೋಗ್ರೇಡ್ ಮೋಶನ್ ಅಂದರೆ ಪೂರ್ವ-ಪಶ್ಚಿಮ ದಿಶಾಚಲನೆ) ಕೊನೆಗೊಂಡು ಋಜುಗಮನ (ಡೈರೆಕ್ಟ್ ಮೋಶನ್ ಅಂದರೆ ಪಶ್ಚಿಮ-ಪೂರ್ವ ದಿಶಾಚಲನೆ) ಆರಂಭವಾಗಿತ್ತು. ಹೀಗಾಗಿ ಅದು ಕ್ರಮೇಣ ಸೂರ್ಯಸಮೀಪವರ್ತಿ ಆಗುತ್ತ ಬೆಳಕಿನ ಕಡಲಿನಲ್ಲಿ ಲೀನವಾಗಿ ಹೋಯಿತು. ಪ್ಯಾಟ್ಸಿಗೆ (ಮತ್ತು ವ್ಯಾಪಕವಾಗಿ ಎಲ್ಲ ಆಸಕ್ತ ಖಗೋಳ ವಿಜ್ಞಾನಿಗಳಿಗೆ) ಆಗ ಎದುರಾದ ಸಮಸ್ಯೆ ಇದು: ಆಗಂತುಕ ಕಾಯ ಮತ್ತೆ ಸೂರ್ಯ ಪ್ರಕಾಶದಿಂದ ಹೊರಬಂದು ಕಾಣಿಸಿಕೊಳ್ಳುವುದು ನಿಶ್ಚಯ; ಆದರೆ, ಎಂದು ಎಲ್ಲಿ ಕಾಣಿಸಿಕೊಂಡಿತು ಎಂಬುದನ್ನು ನಿರ್ಧರಿಸಲು ನಿಷ್ಕಷ್ಟ ಗಣಿತಗಣನೆ ಬೇಕೇಬೇಕು; ಇಂಥ ಗಣನೆ ಮುನ್ನುಡಿವ ಸ್ಥಳ-ಕಾಲದಲ್ಲಿ ಅದನ್ನು ಗುರುತಿಸುವುದು ಸುಲಭ ; ಗಣನೆ ಇಲ್ಲವಾದರೆ ಮತ್ತೆ ಬಾನ ಬಿತ್ತರದ ಅಗಣಿತ ಬೆಳಕಿನ ಹುಡಿಗಳ ಎರಚಿಕೆಯಲ್ಲಿ ಅದನ್ನು ಹೆಕ್ಕುವುದು ಅಸಾಧ್ಯವಲ್ಲದಿದ್ದರೂ ಅತಿ ಅಸಂಭಾವ್ಯವಂತೂ ಹೌದು. 

ಪ್ಯಾಟ್ಸಿ ಸಂಗ್ರಹಿಸಿದ್ದ ದತ್ತಾಂಶಗಳೇನು ? ಕೇವಲ 30 ವ್ಯಾಪ್ತಿಯ ಕಂಸದ ಮೇಲೆ ನಲವತ್ತೊಂದು ದಿವಸಗಳ ಕಾಲ ಆಗಂತುಕ ಕಾಯದ ಮಂದಗಮವನ್ನು ಗಮನಿಸಿ ದೊರೆತವು ಮಾತ್ರ. ಈ ಅತ್ಯಲ್ಪ ಮಾಹಿತಿಗಳಿಂದ ಅದರ ಕಕ್ಷೆ ಹಾಗೂ ಚಲನೆಗಳನ್ನು ನಿರ್ಧರಿಸಲು ಸಾಕಷ್ಟು ಪರಿಕರಗಳು ಪ್ರಚಲಿತ ಗಣಿತದಲ್ಲಿ ಇರಲಿಲ್ಲ. ಪ್ರಪಂಚದ ಸಾರ್ವಕಾಲಿಕ ಶ್ರೇಷ್ಠ ಗಣಿತವಿದರ ಪೈಕಿ ಒಬ್ಬನಾದ ಗೌಸ್ (1777-1855) ಈ ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿ ಹೊಸ ಗಣಿತ ವಿಧಾನವನ್ನೇ ಆವಿಷ್ಕರಿಸಿ ಆಗಂತುಕ ಕಾಯದ ಭವಿಷ್ಯವನ್ನು ನುಡಿಯಲು ಸೂತ್ರ ನೀಡಿದ. ಪ್ಯಾಟ್ಸಿ ಸಂಗ್ರಹಿಸಿ ಪೂರೈಸಿದ ದತ್ತಾಂಶಗಳು ಅವು ಎಷ್ಟೇ ಅಲ್ಪವಾಗಿದ್ದರೂ ಪೂರ್ತಿ ನಿಷ್ಕಷ್ಟವಾಗಿದ್ದುದರಿಂದ, ಅವನ್ನು ಆಧರಿಸಿ ಗೌಸ್ ನೀಡಿದ ಸೂತ್ರ ಪೂರ್ಣ ಯಶಸ್ವಿಯಾಯಿತು. ಆಗಂತುಕಕಾಯವನ್ನು ಮಗುದೊಮ್ಮೆ ಸುಲಭವಾಗಿ ಸೆರೆ ಹಿಡಿಯುವುದು ಸಾಧ್ಯವಾಯಿತು. ಪ್ಯಾಟ್ಸಿ ಅದಕ್ಕೆ ಸೀರೀಸ್ (ಸಿಸಿಲಿಯ ಅಧಿದೇವತೆ) ಎಂಬ ಹೆಸರಿಟ್ಟ. ಮಂಗಳ ಹಾಗೂ ಗುರುಕಕ್ಷೆಗಳ ನಡುವೆ, ಟಿಶಿಯಸ್- ಬೋಡ್ ಸೂತ್ರಾನುಸಾರ, ಇದೆಯೆಂದು ನಂಬಲಾಗಿದ್ದ ಆದರೆ, ಆ ತನಕ ಯಾರಿಗೂ ಗೋಚರಿಸದಿದ್ದ ಗ್ರಹ ಇದಾಗಿತ್ತು. ಇದರ ಅಲ್ಪಗಾತ್ರ ಮಾತ್ರ ಖಗೋಳ ವಿಜ್ಞಾನಿಗಳ ಕಲ್ಪನೆಗೆ ವ್ಯತಿರಿಕ್ತವಾಗಿತ್ತು. ಮುಂದೇ ಅದೇ ವಲಯದಲ್ಲಿ ಅಧಿಕ ಸಂಖ್ಯೆಯಲ್ಲಿ ಅಲ್ಪಕಾಯಗಳು ಇಂಥವುಗಳ ಹೊನಲೇ-ಪತ್ತೆ ಆದಾಗ ಅವುಗಳಿಗೆ ಒಟ್ಟಾಗಿ ಕ್ಷುದ್ರ ಗ್ರಹಗಳು (ನೋಡಿ- ಕ್ಷುದ್ರಗ್ರಹಗಳು) ಎಂಬ ಹೆಸರನ್ನು ಕೊಡಲಾಯಿತು. ಕ್ಷುದ್ರ ಗ್ರಹಗಳ ಇರವನ್ನು ನಮಗೆ ಪ್ರಕಟಿಸಿದ ಮೊದಲ ಕಾಯ ಸೀರೀಸ್; ಇದನ್ನು ಮೊದಲು ಕಂಡವ ಪ್ಯಾಟ್ಸಿ.

ಪ್ಯಾಟ್ಸಿ ಪ್ರಕಟಿಸಿದ್ದ ನಕ್ಷತ್ರ ಸ್ಥಾನ ಸೂಚಿಗಳು ಪ್ರಖ್ಯಾತವಾಗಿವೆ. 6,748 ನಕ್ಷತ್ರಗಳನ್ನು ಒಳಗೊಂಡ ಯಾದಿ 1803 ರಲ್ಲಿಯೂ 7,646 ನಕ್ಷತ್ರಗಳನ್ನು ಒಳಗೊಂಡ ಯಾದಿ 1813 ರಲ್ಲಿಯೂ ಪ್ರಕಟವಾದವು. ಈ ಗ್ರಂಥಗಳು ಪ್ಯಾಟ್ಸಿಗೆ ಆಯಾ ವರ್ಷದ ಶ್ರೇಷ್ಠ ಖಗೋಳ ವಿಜ್ಞಾನ ಗ್ರಂಥಗಳ ಕರ್ತೃ ಎಂಬ ಗೌರವವನ್ನು ಆ ಸಾಧನೆಗಾಗಿ ಬಹುಮಾನಗಳನ್ನೂ ತಂದುಕೊಟ್ಟವು. ಅಯನಾಂಶ ಸಂಸ್ಕರಣೆಯನ್ನು (ಪ್ರಿಸೆಶನ್ ಆಫ್ ಈಕ್ವಿನಾಕ್ಸಸ್) ಕೂಡ ಪ್ಯಾಟ್ಸಿ ನಿರ್ವಹಿಸಿದ್ದಾನೆ.
ಪ್ಯಾಟ್ಸಿ 1826 ರ ಜುಲೈ 22 ರಂದು ಮರಣ ಹೊಂದಿದ.
(ಎಸ್.ಎಸ್.ಆರ್.ಐ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ